ನಮ್ಮ ಕಾಲೇಜಿನ ಪರಿಚಯ

ಪುರಾಣ ಪ್ರಸಿದ್ಧ ಶ್ರೀ ಆದಿಚುಂಚನಗಿರಿ ಮಠವು ಅನ್ನ ದಾಸೋಹಕ್ಕೆ ಹೆಸರುವಾಸಿಯಾಗಿರುವಂತೆಯೇ ದಿನಾಂಕ 13-12-1973ರಂದು ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಸ್ಥಾಪಿಸುವುದರ ಮೂಲಕ ಜ್ಞಾನ ದಾಸೋಹಕ್ಕೆ ನಾಂದಿಯಾಯಿತು. ಈಗ ಟ್ರಸ್ಟ್ನ ಅಧೀನದಲ್ಲಿ ಪೂರ್ವ ಪ್ರಾಥಮಿಕ ಹಂತದಿಂದ ವೈದ್ಯಕೀಯ-ತಾಂತ್ರಿಕ ಶಿಕ್ಷಣದವರೆಗೆ 500ಕ್ಕೂ ಹೆಚ್ಚು ಶಾಲಾ ಕಾಲೇಜುಗಳು ನಾಡಿನಾದ್ಯಂತ ಲಕ್ಷಾಂತರ ಮಕ್ಕಳಿಗೆ ವಿದ್ಯಾದಾನ ಮಾಡುತ್ತಿವೆ. ಇಂತಹ ಪ್ರಸಿದ್ಧ ಶಿಕ್ಷಣ ಸಂಸ್ಥೆಗಳಲ್ಲಿ ಶ್ರೀ ಆದಿಚುಂಚನಗಿರಿ ಕಲಾ ಮತ್ತು ವಾಣಿಜ್ಯ ಕಾಲೇಜು ಪ್ರಥಮವಾಗಿ ಸ್ಥಾಪಿತವಾದ ಸಂಸ್ಥೆಯಾಗಿದೆ.

      ಶ್ರೀ ಆದಿಚುಂಚನಗಿರಿ ಕ್ಷೇತ್ರದಲ್ಲಿ ಸುಸಜ್ಜಿತ ಕಟ್ಟಡದೊಂದಿಗೆ 1975ರಲ್ಲಿ ಪ್ರಾರಂಭವಾದ ಈ ಕಾಲೇಜು ಸಮಾಜಕ್ಕೆ ವಿವಿಧ ಆಯಾಮಗಳಲ್ಲಿ ಸೇವೆ ಸಲ್ಲಿಸುತ್ತಿದೆಯಲ್ಲದೆ, ರಾಷ್ಟ್ರಕ್ಕೆ ಅನೇಕ ಪ್ರತಿಭೆಗಳನ್ನು ಕೊಡುಗೆಯಾಗಿ ನೀಡಿದೆ. ಬಿ.ಎ., ಬಿ.ಕಾಂ., ಪದವಿ ತರಗತಿಗಳೊಂದಿಗೆ ಪ್ರಾರಂಭಗೊಂಡ ಈ ಕಾಲೇಜಿನ ವಿದ್ಯಾರ್ಥಿಗಳ ಸಂಖ್ಯೆ 108 ರಿಂದ 1083ಕ್ಕೆ ತಲುಪಿದೆ. ಜೊತೆಗೆ 2006-2007ರಲ್ಲಿ ಬಿ.ಎಸ್ಸಿ., ತರಗತಿಯನ್ನು ಹಾಗೂ 2011-12 ರಲ್ಲಿ ಬಿ.ಬಿ.ಎಂ ತರಗತಿಗಳನ್ನು ಪ್ರಾರಂಭಿಸಲಾಗಿದೆ. 2014-15ನೇ ಸಾಲಿನಲ್ಲಿ ವಾಣಿಜ್ಯಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ತರಗತಿಗಳನ್ನು(ಎಂ.ಕಾಂ.,) ಪ್ರಾರಂಭಿಸಲಾಗಿದೆ.

      ಶಿಕ್ಷಣ ಟ್ರಸ್ಟ್ನ ಸಂಸ್ಥಾಪಕ ಅಧ್ಯಕ್ಷರಾಗಿದ್ದ ಭೈರವೈಕ್ಯ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಕೃಪಾಶೀರ್ವಾದ ಹಾಗೂ ಪ್ರಸ್ತುತ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿರುವ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮಿಜಿಯವರು ಮತ್ತು ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಶ್ರೀ ಪುರುಷೋತ್ತಮಾನಂದನಾಥ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಈ ಕಾಲೇಜು ಪ್ರವರ್ಧಮಾನಗೊಳ್ಳುತ್ತಿದೆ. ಸೇವಾ ಮನೋಭಾವದ ಪ್ರಾಂಶುಪಾಲರು, ಸಮರ್ಥ ಅಧ್ಯಾಪಕರು ಹಾಗೂ ನೌಕರ ವರ್ಗದವರು ಕಾಲೇಜಿನ ಸವರ್ಾಂಗೀಣ ಪ್ರಗತಿಗಾಗಿ ದುಡಿಯುತ್ತಿದ್ದಾರೆ.

      ಪ್ರತಿ ತಾಲ್ಲೂಕು ಕೇಂದ್ರಕ್ಕೆ ಒಂದು ಪ್ರಥಮ ದರ್ಜೆ ಕಾಲೇಜು ಎಂಬ ಸರ್ಕಾರದ ನೀತಿಗೆ ಅನುಗುಣವಾಗಿ ಈ ಕಾಲೇಜು 1988 ರಲ್ಲಿ ಶ್ರೀಕ್ಷೇತ್ರದಿಂದ ನಾಗಮಂಗಲಕ್ಕೆ ಸ್ಥಳಾಂತರಗೊಂಡಿತು. ಸುಸಜ್ಜಿತ ತರಗತಿ ಕೊಠಡಿಗಳು, ಕಂಪ್ಯೂಟರ್ ಲ್ಯಾಬ್ ಗಳು ಅತ್ಯಾಧುನಿಕ ಸೌಲಭ್ಯವುಳ್ಳ ವಿಚಾರ ಸಂಕಿರಣ ಸಭಾಂಗಣದಿಂದ ಕೂಡಿರುವ ಈ ಕಾಲೇಜು ಈಗ ನ್ಯಾಕ್ ಸಂಸ್ಥೆಯಿಂದ ""ಬಿ++"" ಗ್ರೇಡ್ ಮಾನ್ಯತೆಯನ್ನು ಮೂರನೇ ಸಲ ಪಡೆದುಕೊಂಡಿದೆಯಲ್ಲದೆ ಪ್ರತಿಭಾವಂತ ವಿದ್ಯಾರ್ಥಿಗಳನ್ನು ರೂಪಿಸುವುದರ ಮೂಲಕ ವಿಶ್ವವಿದ್ಯಾನಿಲಯದ ಮಟ್ಟದಲ್ಲಿ ಅನೇಕ ರ್ಯಾಂಕ್ ಹಾಗೂ ಚಿನ್ನದ ಪದಕಗಳನ್ನುಗಳಿಸಿಕೊಂಡಿದೆ. 50 ಅಧ್ಯಾಪಕರು ಹಾಗೂ 15 ಅಧ್ಯಾಪಕೇತರರು ಶ್ರದ್ಧೆ ಹಾಗೂ ಪ್ರಾಮಾಣಿಕತೆಯಿಂದ ಕರ್ತವ್ಯವನ್ನು ನಿರ್ವಹಿಸುವುದರ ಮೂಲಕ ಈ ಕಾಲೇಜನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಿದ್ದಾರೆ.